Skip to main content

ಆವರಣಗಳನ್ನು ಕಳಚುತ್ತಾ...




ಮಿಥ್ಯಾವಾಸ್ತವದ ಆವರಣಗಳೂ, ವಾಸ್ತವದ ವೈವಿಧ್ಯಗಳೂ...

Case No 1 : ಆ ದಿನ ಮೊದಲುಗೊಂಡದ್ದೇ ವೈ ಫೈ ಕೆಲಸ ಮಾಡುತ್ತಿಲ್ಲವೆಂಬ ಘೋರ ಸತ್ಯದೊಂದಿಗೆ. ಪ್ರಾತಃಕಾಲವೇ ಇಂಟರ್ ನೆಟ್ ಕೈ ಕೊಟ್ಟು ಕೂತುಬಿಟ್ಟರೆ, ಕೆಲಸಗಳು ಮುಂದುವರೆಯೋದು ಹೇಗೆ? ಮಾಡೆಮ್ ಆಫ್ ಮಾಡಿ ಆನ್ ಮಾಡುತ್ತಾ ಬಾರಿ ಬಾರಿ ಚೆಕ್ ಮಾಡಿದಷ್ಟೂ, ಬೇಗ ಬೇಗ ಕೆಲಸ ಮುಗಿಸುವ ನನ್ನ ಒತ್ತಡ ಹೆಚ್ಚುತ್ತಾ ಹೋಯಿತೇ ವಿನಃ ಅಲ್ಲಿ ಜೀವ ಮಿಣುಕಲಿಲ್ಲ. ಮನಸು ಹತಾಶೆಗೊಂಡಿತು. ಹೀಗಾದರೆ ಈಗ ಚಟ್ನಿ ರುಬ್ಬೋದು ಹೇಗೆ?!! ನನ್ನ ಒಂದೂವರೆ ವರ್ಷದವಳು ಏಳುವ ಮುನ್ನವೇ ಎಲ್ಲಾ ಮುಗಿಯಬೇಕಲ್ಲಾ? - ಎಂದುಕೊಳ್ಳುತ್ತಿದ್ದಂತೇ ನನ್ನ ಯೋಚನೆಗೆ ನನಗೇ ಶೇಮ್ ಎನಿಸಿತು. ಚಟ್ನಿ ರುಬ್ಬೋದಕ್ಕೆ ಇಂಟರ್ ನೆಟ್ ಯಾಕೆ? ಎಲೆಕ್ಟ್ರಿಸಿಟಿ ಸಾಲದೇ?!!

Case No 2 : ನನ್ನ ಒಂದೂವರೆ ವರ್ಷದವಳನ್ನು ಕಟ್ಟಿಕೊಂಡು ಆ ಬಾರಿ ನಾನೊಬ್ಬಳೇ ಮಂಗಳೂರಿಗೆ ಹೋಗಿದ್ದೆ. ಅತ್ತೆ ಮನೆ, ತವರು ಮನೆಯೆಂದು ಕಳೆದು, ಮತ್ತೆ ಬೆಂಗಳೂರಿಗೆ ಮರಳುವ ಯೋಚನೆಗೆ ಅಡ್ಡಿಯಾದದ್ದು ಪಾರ್ಶ್ವವಾಯು ಹೊಡೆದಂತೆ ಆಡುತ್ತಿದ್ದ ನನ್ನ ಮೊಬೈಲ್ ಫೋನ್! ಅದೇ ನನ್ನ ಒಂದೂವರೆ ವರ್ಷದವಳ ಕೃಪಾಕಟಾಕ್ಷದಿಂದ ಮೊಬೈಲ್ ನ ಅರ್ಧ ಭಾಗದ ಸ್ಕ್ರೀನ್ ಛಿದ್ರವಾಗಿತ್ತು. ಈಗಾಗಲೇ ಇರುವ e- ವೇಸ್ಟುಗಳ ಜೊತೆ, ನನ್ನ ಫೋನೂ ಲೋಕಾರ್ಪಣೆಯಾಯಿತೆಂಬುದಕ್ಕಿಂತಲೂ ಹೆಚ್ಚಾಗಿ ಕಾಡಿದ್ದು, ಈಗ ನಾನು ಬೆಂಗಳೂರು ತಲುಪುವುದು ಹೇಗೆ ಎಂಬ ಪ್ರಶ್ನೆ! ಹೌದು! ಮುಟ್ಟಿದರೆ ಸ್ಪಂದಿಸದ ಮೊಬೈಲ್ ಇಟ್ಟುಕೊಂಡು ಬೆಂಗಳೂರಿಗೆ ಹೇಗೆ ಹೋಗಲಿ? ಅಡ್ಡ ಹಿಡಿದರೆ ಸ್ಕ್ರೀನ್ ಏನೋ ತಿರುಗುತ್ತಿದೆ. ಆದರೆ, 9 ಒತ್ತಬಹುದು. ೦ ಒತ್ತಲಾಗದು. a ಒತ್ತಬಹುದು, n ಒತ್ತಲಾಗದು! ಹೀಗಾದರೆ, ಟಿಕೆಟ್ ಬುಕ್ ಮಾಡಲೇ ಆಗದಲ್ಲಪ್ಪಾ... ! ಬದುಕು ಫಿನಿಶ್ಡ್ ಎನಿಸಿತು. ಕೆಲ ಕ್ಷಣ ಬಿಟ್ಟು ಬುದ್ಧಿ ಎಂಬುದೊಂದು ಓಡತೊಡಗಿದಮೇಲೇ ಸಮಾಧಾನವಾಗಿದ್ದು. ನಾನೇನು ಮೊಬೈಲ್ ನಲ್ಲೇ ಬೆಂಗಳೂರಿಗೆ ಹಾರಹೊರಟಿಲ್ಲವಷ್ಟೇ? ಮೊಬೈಲ್ ಇಲ್ಲದೆಯೇ, ಯಾವುದೇ ಸಾರಿಗೆ ಸಂಪರ್ಕ ಬಳಸಿ ನಿಶ್ಚಿಂತೆಯಿಂದ ತಲುಪಬಹುದು ರಾಜಧಾನಿಯನ್ನು! ಬದುಕು ಈ ಪರಿ ಮೊಬೈಲ್ ಆಧಾರಿತವಾಗಿಬಿಡಬೇಕೇ ಎನಿಸಿ ಹಣೆಚಚ್ಚಿಕೊಳ್ಳುವಂತಾಯಿತು.

ಇಂತಹ  ಅನರ್ಥಗಳು ಹೆಚ್ಚುತ್ತಲೇ ಇರುವುದು ಯಾವ ರೋಗದ ಲಕ್ಷಣಗಳು? ’Alexa, explain this disease” ಎಂದು ಕೇಳಲೇ?

ಆಭಾಳಿಗಿನ್ನೂ ಎರಡು ತಿಂಗಳಿರುವಾಗಲೇ ಬೆಂಗಳೂರಿಗೆ ಬಂದಾಗಿತ್ತು. ದೈನಂದಿನ ಅಗತ್ಯದ ವಸ್ತುಗಳ ಪೂರೈಕೆಗೆ ಮೊಬೈಲ್ ಆಪ್ ಮೊರೆ ಹೋದದ್ದು ಅಂದಿನ ಅನಿವಾರ್ಯವಾಗಿತ್ತು. ದಿನ ಹೋಗುತ್ತಾ ಹೋಗುತ್ತಾ ಅದೇ ಅಭ್ಯಾಸವಾಗಿ ನಿಜ ಜಗತ್ತಿನ ಜೊತೆ ಸಂಪರ್ಕವೇ ಕಡಿದು ಹೋಗಿತ್ತೆಂದರೆ ಆಶ್ಚರ್ಯವೇನು ಇಲ್ಲ ಅಲ್ಲವೇ? ಈ ಮಿಥ್ಯೆಯ ಜಗತ್ತಿಂದ ಕಳಚಿಕೊಂಡು ನಿಜ ಜಗತ್ತನ್ನು ಸಂಧಿಸುವ ಪ್ರಯತ್ನಗಳು ನಡೆಯುತ್ತಿರಲಿಲ್ಲ ಎಂದಲ್ಲ. ಅತ್ತೆ ಮಾವರು ಬಂದಾಗ, ಅಮ್ಮ ಬಂದಾಗ ಅನಾಯಸವಾಗಿ ಮಗುವನ್ನು ಮನೆಯಲ್ಲಿ ಬಿಟ್ಟು, ’ಏರಿಯಾ ಪ್ರದಕ್ಷಿಣೆ’ ಹಾಕುವುದು ಸಾಧ್ಯವಾದರೂ ಆಮೇಲೆ ಮತ್ತೆ ಮಿಥ್ಯಾವಾಸ್ತವದೊಳಗೇ ಬದುಕನ್ನು ಕಂಡುಕೊಳ್ಳುವಂತಾಗಿತ್ತು. ಅಭಯ ಫ್ರೀ ಆದಾಗ ಬೇಬಿ ಸಿಟ್ಟಿಂಗ್ ಡ್ಯೂಟಿ ಅವರಿಗೆ ಕೊಟ್ಟು ನನ್ನ ಸುತ್ತಲಿನ ಜಗತ್ತಿನೊಂದಿಗೆ ಮತ್ತೆ ಕನೆಕ್ಟ್ ಮಾಡಿಕೊಳ್ಳಬೇಕು, ಹೊರ ಜಗತ್ತಿನೊಂದಿಗೆ ಬೆರೆಯಬೇಕು ಎಂದುಕೊಳ್ಳುತ್ತಲೇ ವರ್ಷ ದಾಟಿದೆ! ಮುಗಿಯದ ಡೆಡ್ ಲೈನ್ ಗಳ ನಡುವೆ ಸಮಯ ಹೊಂದಿಸುವುದು ಅವರಿಗೂ ಸುಲಭವಾಗಿರಲಿಲ್ಲ. ಎಷ್ಟೋ ಬಾರಿ ರಾತ್ರಿ ಹತ್ತಾದರೂ ಅಭಯನಿನ್ನೂ ಮನೆ ತಲುಪದಾಗ, ಗೂಗಲ್ ಮ್ಯಾಪ್ ತೆರೆದು ಅಭಯ ಎಲ್ಲಿ ತಲುಪಿರಬಹುದೆಂದು ನೋಡಿದ್ದಿದೆ. Sorry, ಇವಳೆಂಥಾ ಸ್ಪೈ ಹೆಂಡತಿ! ಗಂಡನ ಕಾರಲ್ಲೂ ಜಿಪಿಸ್ ಇಟ್ಟಿದ್ದಾಳಾ ಎಂದುಕೊಳ್ಳಬೇಡಿ. ’ಮಿಥ್ಯಾವಾಸ್ತವಬದುಕನ್ನು ಈ ಮಟ್ಟಿಗೆ ಆವರಿಸಿಬಿಟ್ಟಿತ್ತು! ಇದರಿಂದ ಹೊರಬರುವುದಕ್ಕೂ ಮತ್ತೆ ಅದೊರಳಗೇ ದಾರಿ ಹುಡುಕುವ ತಪ್ಪು ಮಾಡದೇ, ಅರೆ ಬರೆ ಡಾಂಬರು ಕಿತ್ತ, (ಉಳಿದಿರುವ?) ಫುಟ್ ಪಾತೇ ಕಸದ ತೊಟ್ಟಿಯಾಗಿರುವ ನಮ್ಮನೆ ಸುತ್ತಲಿನ  ದಾರಿ ಹಿಡಿಯುವುದೇ ಲೇಸೆಂದು ನಿರ್ಧರಿಸಿ, ಅಭಯನ ಫ್ರೀ ಟೈಮ್ ಗಾಗಿ ಕಾಯುವುದು ಬಿಟ್ಟೆ, ಎಲ್ಲಿಗೆ ಸಾಧ್ಯವಾಗುತ್ತದೋ ಅಲ್ಲಿಗೆ, ಯಾವಗ ಸಾಧ್ಯವಾಗುತ್ತದೋ ಆವಾಗ ಹೊರ ನಡೆಯುವುದು; ನಿರ್ದಿಷ್ಟ ಗುರಿ ಉದ್ದೇಶಗಳಿಲ್ಲದಿದ್ದರೆ, ಶುಂಠಿ ಹಸಿ ಮಣಸು ತರುವ ನೆಪದಲ್ಲಾದರೂ ಸರಿ, ನಾನೇ ಹೊರ ಹೋಗಿ, ತರಕಾರಿಗಳನ್ನು ಕೈಯಲ್ಲಿ ಮುಟ್ಟಿ, ವರ್ತಕನಿಗೆ ಕೈಯಾರ ಕಾಸು ಕೊಟ್ಟು, ನಾನೇ ಬ್ಯಾಗಲ್ಲಿಟ್ಟು ತಂದಿರುವ ಬಟ್ಟೆ ಚೀಲದಲ್ಲಿ ಸಾಮಾನುಗಳನ್ನು ತುಂಬಿ ತರುವುದೇ ಸರಿ ಎಂದುಕೊಂಡೆ. ಹೊರಟೆ. ಹೆಗಲಿಗೆ ಬ್ಯಾಗು, ಬಗಲಿಗೆ ಕೂಸು; ನಾನು ನಡೆದದ್ದೇ ದಾರಿ!

ಕಲ್ಪನೆಯಲ್ಲಿ ಎಲ್ಲವೂ ರಮ್ಯ. ಆದರೆ ವಾಸ್ತವದಲ್ಲಿ ಅಂದುಕೊಂಡಂತೆ ದಾರಿ ಸಾಗುವುದಿಲ್ಲ. ಅತ್ತ, ಜಾರುತ್ತಿರುವ ಬ್ಯಾಗನ್ನು ಸರಿ ಮಾಡಿಕೊಂಡರೆ ಇತ್ತ ಕೂಸು ಜಾರುವುದು. ಅವಳನ್ನು ಏರಿಸಿ ಸರಿಯಾಗಿ ಕೂರಿಸಿದರೆ ಮತ್ತೆ ಬ್ಯಾಗು ಜಾರುವುದು. ಕೇಳುವುದಕ್ಕೆ ಬಹಳ ಸಣ್ಣ ಸಮಸ್ಯೆಯೇ. ಆದರೆ ಜಾರುತ್ತಿರುವ ಈ ಎರಡನೂ ಸಂಭಾಳಿಸುತ್ತಾ ಹೋದ ದಾರಿಯಲ್ಲೇ ಮತ್ತೆ ಮನೆ ಬಂದು ಸೇರುವುದೇ ದೊಡ್ಡ ಸವಾಲೆನಿಸಿಬಿಡುತ್ತದೆ. "ಧರಣಿಗೆ ಗಿರಿ ಭಾರವೇ... ಗಿರಿಗೆ ಮರವು ಭಾರವೇ.." ಎಂದು ಬರೆಯುವ ಹೊತ್ತಲ್ಲಿ ಚಿ.ಉದಯ ಶಂಕರರು ಮಗ್ಗುಲಲ್ಲಿ ಮಗುವನ್ನೂ ಇರಿಸಿಕೊಂಡಿದ್ದರೆ ಮೂಡುತ್ತಿದ್ದ ಸಾಹಿತ್ಯವೇ ಬೇರೆಯಾಗುತ್ತಿತ್ತೋ ಏನೋ! ಈ ಹಾಡನ್ನೂ ಸೇರಿ, ಅಮ್ಮ ಇಸ್ ಗ್ರೇಟ್ ಎಂಬ ಹಾಡುಗಳು ಅದೆಷ್ಟೋ ಸಂಖ್ಯೆಗಳಲ್ಲಿ ಬಂದಿವೆ ಹಾಗೂ ಅಮ್ಮನೆಂದರೆ ದೇವರಿಗಿಂತಲೂ ದೊಡ್ಡ ಮ್ಯಾಜೀಶ್ಯನ್ ಎಂದು ಸಾರ್ವತ್ರಿಕವಾಗಿ ಜಗತ್ತು ಒಪ್ಪಿಕೊಂಡದ್ದೂ ಆಗಿದೆ. ಆದರೆ... ’ಬ್ರ್ಯಾಂಡ್ ನ್ಯೂ’ ಅಮ್ಮನಾದ ನನಗೋ... ಈ ತಾಯ್ತನ ಇಸ್ ನಾಟ್ ಮೈ ಕಪ್ ಆಫ್ ಟೀ ಎಂಬ ಭಾವ!  ಯಾಕಾದರೋ ಹೀಗೆ ನಡೆದು ಹೋಗುವ ಭ್ರಾಂತು ಹುಟ್ಟಿತು ಮನಸಲ್ಲಿ? ಬಿಗ್ ಬಾಸ್ಕೆಟ್ ಇತ್ತಲ್ಲಾ... ಇದೆಲ್ಲಾ ಬೇಕಿತ್ತಾ ಎನಿಸುವುದು. ಇಲ್ಲ, ಇಲ್ಲಿಗೇ ಬಿಟ್ಟರೆ ಮತ್ತೆ ಮಿಥ್ಯೆಯೊಳಗೇ ಮುಳುಗಬೇಕು. ಬದುಕಬೇಕಾದರೆ ಸಹಿಸಬೇಕು. ಉಸಿರೆಳೆದುಕೊಂಡು, ಹೆಗಲಲ್ಲೂ ಬಗಲಲ್ಲೂ ಇನ್ನಷ್ಟು ಶಕ್ತಿ ತಂದುಕೊಳ್ಳಬೇಕು! ಸಿನೆಮಾ ಗೀತೆಯ ಅಮ್ಮನಂತಲ್ಲದಿದ್ದರೂ ಸಾಧ್ಯವಾದಷ್ಟರ ಮಟ್ಟಿಗೆ ನನ್ನೊಳಗಿನ ಅಮ್ಮನನ್ನೂ ಅಮ್ಮತನದ ಹೊರತಾಗಿರುವ ನನ್ನನ್ನೂ ಜೀವಂತವಾಗಿರಿಸುವ ಪ್ರಯತ್ನದಲ್ಲಿ, ಮನಸು ಗಟ್ಟಿ ಮಾಡುತ್ತಲೇ ಮತ್ತೆ ಮತ್ತೆ ಹೊರಟೆ. ಅದೇ ಶುಂಠಿ ಹಸಿ ಮೆಣಸಿನ ನೆಪ ಮಾಡುತ್ತಾ, ಮತ್ತೊಮ್ಮೆ ಪಾರ್ಕು, ಮಾಲ್ ಗಳವರೆಗೆ ವಿಸ್ತರಿಸುತ್ತಾ. ಬ್ಯಾಗ್ ಜಾರುವ ಸಮಸ್ಯೆ ಮುಂದಿನ ದಿನಗಳಲ್ಲಿ ಕಾಣಿಸಲಿಲ್ಲ. ಸ್ಲಿಂಗ್ ಬ್ಯಾಗ್ ಉತ್ತಮವೆಂಬುದು ಕಂಡುಕೊಂಡಿದ್ದೆ. ಇನ್ನೇನು, ಸ್ಲಿಂಗ್ ಬ್ಯಾಗೆಂಬ ಜನಿವಾರ ಧನಿರಿಸಿ ಮತ್ತೆ ಹೊರಡುವುದೇ! ಈ ಮೆಟ್ರೋ ಸಿಟಿಯಲ್ಲಿ ನಗರ ಸುತ್ತಲು ನೆಪಗಳು ಕಡಿಮೆ ಇದ್ದಾವೆಯೇ? ಆ ನೆಪಗಳನ್ನು ನಾವೇ ಹುಡುಕಬೇಕಷ್ಟೇ. ಜನರೊಂದಿಗೆ ಬೆರಿ, ನಿನ್ನೊಳಗನ್ನು ಅರಿ, ನಗುವುದನ್ನು ಕಲಿ ಎಂದು ಲೋಕ ಆಮಂತ್ರಣ ನೀಡದು. ಇಲ್ಲಿ ಬೇಕಿರುವುದು ಸ್ವಯಂ ಪ್ರೇರಣೆಯೊಂದೇ! ಸದ್ಯದ ಪರಿಸ್ಥಿತಿಯೊಳಗಿದ್ದೇ ಸ್ಪೂರ್ತಿ ತುಂಬಿಕೊಂಡು ಮನಸನ್ನು ಅರಳಿಸಬೇಕು. ಆವರಣದಿಂದ ಕಳಚಿಕೊಂಡು ಹೊರ ಜಗತ್ತಿನೊಂದಿಗೆ ಬೆರೆಯಲೇ ಬೇಕು! ಆದರೆ ಈ ಎಲ್ಲಾ ಪ್ರಯತ್ನಗಳಿಗೆ ತಣ್ಣೀರು ಎರಚುವುದೇ ಈ ಆಟೋರಾಜರು. ಏನೋ ಕ್ರಾಂತಿ ಮಾಡುತ್ತೇನೆಂದು ಹೊರ ನಡೆದರೆ ಒಂದೋ ಆಟೋ ಸಿಗದು, ಸಿಕ್ಕರೆ ನಾವು ಕೇಳಿದ ಕಡೆ ಬಾರರು, ಬಂದರೆ ಚೇಂಜ್ ಕೊಡರು. ಅದೆಷ್ಟು ಬಾರಿ ಕಾಡಿಸಲಿಲ್ಲ ಈ ಆಟೋದವರು!?

ಇಂಥಾ ಒಂದು ಆಟೋ ಹೊಕ್ಕೆ ಅದೊಂದು ಬೆಳಗ್ಗೆ. ಆಭಾಳಿಗೆ ಕೊಂಡ ಬಟ್ಟೆಯೊಂದನ್ನು ಎಕ್ಸ್ಚೇಂಜ್ ಮಾಡುವ ಸಲುವಾಗಿ. "ನಿಮಿಷಾಂಬ ಟೆಂಪಲ್" ಎಂದೆ.
"ಅದೆಲ್ಲಿ?" ಎಂದು ಆತ ಕೇಳಿದ ರೀತಿಗೇ ಅವನು ಈ ಏರಿಯಾದವನಲ್ಲ ಎಂಬುದು ಅರ್ಥವಾಯ್ತು. "ಹೇಳುತ್ತೇನೆ ನಡೆಯಿರಿ" ಎಂದು ನಾನು ಅನ್ನುತ್ತಿದ್ದಂತೆ, ಮೀಟರ್ ಹಾಕಿದ್ದನ್ನು ಕಂಡು ಅವನು ಇಲ್ಲಿಯವನಲ್ಲವೆಂಬುದು ಖಚಿತವಾಯ್ತು. ನಾನು ಹೋಗಬೇಕಿದ್ದ ಬಟ್ಟೆಯಂಗಡಿ ತಲುಪುತ್ತಲೇ ಮೀಟರು ಮೂವತ್ತಮೂರು ತೋರಿಸಿತು. ಐನೂರರ ನೋಟಿನ ಹೊರತು ಬಿಡಿಗಾಸಿಲ್ಲ ಪರ್ಸಲ್ಲಿ. ಬೆಳ್ಳಂಬೆಳಗ್ಗೆ ಇವನ ಗಂಟಿನ ಮುಖ ನೋಡುವ ಗ್ರಹಚಾರವಾಯಿತಲ್ಲ ಎಂದು ಮನಸೊಳಗೇ ಅಂದುಕೊಂಡೆ. ಅವನೋ... ಕೇವಲ ಗಂಟಲ್ಲ, ನಾಲ್ಕು ದಿನಗಳಿಂದ ಮಲಬದ್ಧತೆಯಿಂದ ನರಳುತ್ತಿರುವಂತೆ ಮುಖ ಮಾಡಿ, "ಚೇಂಜಿಲ್ಲ" ಎಂದರಚಿದ. ತಪ್ಪು ನನ್ನದೇ. ಬೆಳಗೆದ್ದು ಪರ್ಸಲ್ಲಿ ಚಿಲ್ಲರೆ ಇಲ್ಲದೇ ಆಟೋ ಹಿಡಿದವಳು ನಾನೇ ಅಲ್ಲವೇ? ಆ ತಪ್ಪಿಗೆ, "ಎರಡ್ ನಿಮ್ಷ ಇರಿ, ಚೇಂಜ್ ಮಾಡಿಸ್ಕೊಂಡ್ ತರ್ತೀನಿ" ಎಂದು, ಇವಳ ಬಟ್ಟೆ ಕೊಂಡ ಅಂಗಡಿಯನ್ನೇ ಹೊಕ್ಕು ಚೇಂಜ್ ಗಿಟ್ಟಿಸಿಕೊಂಡೆ. ನೂರು, ಐವತ್ತರ ನೋಟುಗಳನ್ನು ನಗುಮುಖದಿಂದ ಕೊಟ್ಟ ಅಂಗಡಿಯಾತ ಪುಣ್ಯಾತರಂತೆಯೇ ಕಂಡರು. ಐವತ್ತನ್ನು ಆಟೋರಾಜನ ಕೈಗಿಟ್ಟರೆ ಗಂಟಿನ ಮುಖ ಕೊಂಚವಾದರೂ ಸಡಿಲವಾಗಬಾರದೇ? ಇಲ್ಲ. ಮತ್ತದೇ ಗಂಟು ಮುಖ. "ಇಲ್ಲೆಲ್ಲಾ ಮೀಟರಲ್ ಯಾರೂ ಬರಲ್ಲ. ನನಗ್ ಬುದ್ಧಿ ಇಲ್ಲ... ಮೀಟರ್ ಹಾಕ್ಕೊಂಡ್ ಬಂದೆ... ಇಷ್ಟೊಂದ್ ಬೆಳಗ್ಗೆ ಚೇಂಜ್ ಬೇರೆ ಕೇಳಿದ್ರೆ... " ಎಂದು ಗೊಣಗಿದ.
"ಚೇಂಜ್ ಮಾಡಿಸ್ಕೊಂಡ್ ಬಂದ್ನಲ್ಲಾ? ಇನ್ನೇನು..?" ಎನ್ನುತಾ ಐವತ್ತು ಅವನ ಕೈಗಿತ್ತೆ. ಮತ್ತದೇ ಗಂಟು ಮುಖ.
"ಚೇಂಜ್ ಇಲ್ಲಾ ಅಂತ ಹೇಳುದ್ನಲ್ಲಾ?"
"ಹೌದು... ಹೇಳಿದ್ರಿ. ಅದ್ಕೇ ಮಾಡ್ಸಿ ತಂದೆ. ಉಳ್ದಿದ್ ಕೊಡಿ"
:"...."
"ಏನೂ ಮಾತಾಡಿಲ್ಲಾಂದ್ರೆ ನಾನ್ ಏನೂಂತ ಅರ್ಥ ಮಾಡ್ಕೊಬೇಕು? ಉಳಿದಿದ್ ಚೇಂಜ್ ಕೊಡಿ..."
"ಅಂಗಡಿ ಪಂಗಡಿ ಯಾವ್ದೂ ಓಪನ್ ಆಗ್ದೇ ಇರೋ ಟೈಮಲ್ ಚೇಂಜ್ ಕೇಳಿದ್ರೆ ಎಲ್ಲಿಂದ ಕೊಡಕ್ಕಾಗತ್ತೆ..? - ಒಂಥರಾ ಗದರಿಸುವಂತೆ ಕೇಳಿದ. ಇಷ್ಟವಾಗಲಿಲ್ಲ ಅವನ ಟೋನ್. ಎಕ್ಸ್ಟ್ರಾ ದುಡ್ಡು ಬೇಕೆಂದರೆ ಅದನ್ನಾದರೂ ಕೇಳಬೇಕಲ್ಲವೇ ಅವನು? ಸುಮ್ಮನೇ ಐವತ್ತು ಅವನಿಗರ್ಪಿಸಿ ಸೀನ್ ಕ್ರಿಯೇಟ್ ಆಗೋದು ತಪ್ಪಿಸಲೇ ಎನಿಸಿತು. ಆದರೆ, ಅವನಾಗೇ ಕೇಳದಿರುವಾಗ ನಾನೇಕೆ ಉದಾರವಾಗಲಿ ಎಂದು ತಡೆದುಕೊಂಡೆ.
"ನಾನ್ ಈಗಷ್ಟೇ ಚೇಂಜ್ ಮಾಡಿಸ್ಕೊಂಡ್  ಬಂದ್ನಲ್ಲಾ? ಅದೇನು ಅಂಗಡಿ ಅಲ್ವಾ? ಅಂಗಡಿಗಳ್ಯಾವ್ದೂ ಓಪನ್ ಆಗಿಲ್ಲ ಅಂದ್ರೇನು?" ಎಂದು ಪ್ರತಿಯಾಗಿ ಕೇಳಿದೆ.
"ಅಂಥಾ ಅಂಗ್ಡೀಗೆಲ್ಲಾ ನಾವ್ ಹೋಗಕ್ಕಾಗತ್ತಾ?" -ಅಸಹ್ಯ ಪಟ್ಟವನಂತೆ ಕೇಳಿದ. ತಪ್ಪಲ್ಲವೇ? ಸ್ತ್ರೀಯರ, ಮಕ್ಕಳ ಉಡುಪು ದೊರೆವಂಥಾ ಅಂಗಡಿ ಅದು. ಅದರಲ್ಲಿ ಅಸಹ್ಯ ಪಡುವುದಕ್ಕೇನಿದೆ ಈತನಿಗೆ ಎಂದು ರೇಗಿ ಹೋಯಿತು ನನಗೆ.
"ಅಂಥಾ ಅಂಗಡಿ ಅಂದ್ರೇನು? ಅಲ್ಲಿರೋರು ಮನುಷ್ಯರಲ್ವಾ? " ಎಂದೆ. ಅಲ್ಲೇ ಎದುರಿಗೆ ಕೊಂಚ ದೂರದಲ್ಲಿ ಹಾರ್ಡ್ ವೇರ್ ಅಂಗಡಿಯೂ ಒಂದಿತ್ತು. ಆತನಿಗೆ ಮಹಿಳೆಯರ ಉಡುಪಿನ ಅಂಗಡಿಗೆ ಹೋಗುವುದಕ್ಕೆ ಅಷ್ಟೊಂದು ಅಸಹ್ಯವಾಗುವುದಿದ್ದರೆ ಪುರುಷರಿರುವ ಆ ಅಂಗಡಿಗಾದರೂ ಹೋಗಬಹುದಲ್ಲಾ? ಚೇಂಜ್ ಕೇಳಿ ಪಡೆಯಬಹುದಲ್ಲಾ ಎಂದು ನಾನೂ ಪ್ರತಿಯಾಗಿ ಕೇಳಿದೆ. ಅದಕ್ಕೂ ಆಸಾಮಿ ಮಾತನಾಡಲಿಲ್ಲ. ಕುಳಿತಲ್ಲಿಂದ ಅಲ್ಲಾಡಲಿಲ್ಲ. "ಕೈಯಲ್ ಮಗೂನೂ ಬ್ಯಾಗನ್ನೂ ಹಿಡ್ಕೊಂಡಿರೋ ನನ್ನನ್ನ ಹೀಗ್ ನಿಲ್ಲಿಸ್ಕೊಂಡು ಮಾತಿಗ್ ಮಾತು ಬೆಳ್ಸಕ್ಕೆ ನಿಮಗ್ ತಮಾಷೆ ಅನ್ನಿಸ್ತಿದ್ಯಾ? ಇದು ಸರಿ ಅಲ್ಲ. ಎಕ್ಸ್ತ್ರ‍ಾ ಕಾಸು ಬೇಕೂಂದ್ರೆ ಬಾಯ್ಬಿಟ್ಟು ಕೇಳಿ. ಈರೀತಿ ಟೈಮ್ ವೇಸ್ಟ್ ಮಾಡ್ಬೇಡಿ ಪ್ಲೀಸ್!"- ಎಂದೆ ಇಲ್ಲದ ಕಟುತನವನ್ನು ಪ್ರದರ್ಶಿಸುತ್ತಾ.
ಮತ್ತದೇ ರಾಗ. "ಚೇಂಜ್ ಅಲ್ಲ ಅಂತ ಹೇಳಿದ್ನಲ್ಲ ಮೇಡಂ... ಎಷ್ಟೂಂತ ಚೇಂಜ್ ಇಟ್ಕೊಂಡ್ ಓಡಾಡಕ್ಕಾಗತ್ತೆ..."
"ಸರಿ. ಚೇಂಜ್ ಇಲ್ಲಾಂತ ನಾವೂ ಯಾರ್ಯಾರ್ಗೇಂತ ದುಡ್ಡು ಬಿಟ್ಕೊಡಕ್ಕಾಗತ್ತೇ? ಪ್ಯಾಸೆಂಜರ್ ನ ಇಷ್ಟೊಂದು ಸತಾಯಿಸೋದು ಒಳ್ಳೇದಲ್ಲ. ನ್ಯಾಯವಾಗಿ ನೀವು ಜೇಂಜ್ ಮಾಡಿಸಿಕೊಡಬೇಕಿತ್ತು. ಪರವಾಗಿಲ್ಲ. ನಿಮ್ಮಿಂದಾಗಲ್ಲ. ನೀವು ಇಲ್ಲೇ ಕೂತಿರಿ. ನಾನೇ ತಗೊಂಡ್ ಬರ್ತೀನಿ" ಎನ್ನುತ್ತಾ ಎದುರಿದ್ದ ಹಾರ್ಡ್ ವೇರ್ ಶಾಪ್ ಕಡೆ  ನಡೆದೆ. ಆ ಸಂದರ್ಭ ಬಹಳ ಅಸಹನೀಯವೆನಿಸಿತು. ಅವನ ವರ್ತನೆಗಿಂತಲೂ ನಾನು ಅವನೊಡನೆ ಇಷ್ಟೊಂದೆಲ್ಲಾ ಮಾತಾಡಬೇಕಾಯಿತಲ್ಲಾ ಎಂಬುದೇ ನನಗೆ ಇರಿಟೇಟ್ ಮಾಡಿತು. ಯಾರೋ ಗುರುತು ಪರಿಚಯ ಇಲ್ಲದವನೊಂದಿಗೆ, ನನ್ನ ತಪ್ಪಿಲ್ಲದಿದ್ದರೂ ಕಹಿಯಾಗಿ ಮಾತಾಡುವ, ಕಹಿಯಾದ ಮಾತು ಕೇಳುವ ಪರಿಸ್ಥಿತಿ ನೆನೆದು ದುಃಖ ಒತ್ತರಿಸಿ ಬಂದಂತಾಯಿತು. ಹದಿನೇಳು ರೂಪಾಯಿಗೆ ಇಷ್ಟೇಲ್ಲಾ ಸೀನ್ ಬೇಕಾ? ಬಿಟ್ಟು ಬಿಡಲಾ ಎಂದು ಮನಸು ಸೋಲ ತೊಡಗಿತು. ಆದರೆ ಯಾರಿಗೆಲ್ಲಾ ಈರೀತಿ ಬಿಟ್ಟು ಬಿಡುವುದು? ಅಷ್ಟಕ್ಕೂ ಅವನು ವಿನಯದಿಂದ ವರ್ತಿಸಿದ್ದರೆ, ಬೇರೆ ಮಾತು. ಅವನೋ ಉಢಾಳನಂತೆ, ಭಂಡನಂತೆ ವರ್ತಿಸುತ್ತಿದ್ದಾನೆ. ಅವನ ಆ ವರ್ತನೆ ನನಗೆ ಮಾಡುತ್ತಿರುವ ಅವಮಾನಂತೆ ಭಾಸವಾಗುತ್ತಿದೆ. ಹಾಗಿರುವಾಗ ಏಕೆ ಬಿಟ್ಟುಕೊಡಬೇಕು ಅಲ್ಲವೇ? ಪ್ರಜ್ಞೆ ಪ್ರಶ್ನಿಸುತ್ತಿದ್ದರೂ ಅವನೊಡನೆ ನಾಲ್ಕು ಮಾತು ಹೆಚ್ಚು ಆಡಿದ ಪರಿಣಾಮ ನನ್ನೊಳಗೆ ಒತ್ತಡ ಉಂಟುಮಾಡುತ್ತಲೇ ಇತ್ತು. ಮಗುವನ್ನು ಸೊಂಟದಲ್ಲಿಟ್ಟು ಚೇಂಜ್ ಗಾಗಿ ರೋಡ್ ರೋಡ್ ಅಲೆಯುವಂತಾಗಿರುವ ಈ ನನ್ನ ಸ್ಥಿತಿಗೆ ಜಗತ್ತಿನ ಮೇಲೇ ತಿರಸ್ಕಾರ ಮೂಡತೊಡಗಿತು. ಆಟೋ ಡ್ರೈವರುಗಳನ್ನು ಹೀರೋಗಳಂತೆ ಬಿಂಬಿಸುತ್ತಲೇ ಇರುವ ಕನ್ನಡ ಸಿನೆಮಾಗಳಿಂದ ಹಿಡಿದು, ಬ್ಯುಸಿ ಶಬ್ದದ ಸೂಪರ್ ಲೇಟಿವ್ ಡಿಗ್ರಿಯೇ ಮೈತಳೆದಂತೆ ಬದುಕುವ ಅಭಯನವರೆಗೂ. ಈ ಸಿಟ್ಟನ್ನು ಈಗೆಲ್ಲಿ ಸುಟ್ಟು ತಿನ್ನಲಿ?  ಹಾರ್ಡ್ ವೇರ್ ಅಂಗಡಿಯವನ ಮುಂದೆ ನನ್ನ ಭಾವವೈಪರೀತ್ಯಗಳನ್ನೆಲ್ಲಾ ತೋರಗೊಡಬಾರದಾಗಿ, ಔಪಚಾರಿಕ ನಗೆ ತಂದುಕೊಂಡು ಚೇಂಜ್ ಗಾಗಿ ಕೇಳಿದೆ.  ಹತ್ತು ಇಪ್ಪತ್ತು ಐದೆಂಬ ನೋಟು ನಾಣ್ಯಗಳನ್ನಿತ್ತು ಇವನೂ ನನ್ನ ದೃಷ್ಟಿಯಲ್ಲಿ ಪುಣ್ಯಾತ್ಮನೆನೆಸಿಕೊಂಡ. ಇಷ್ಟಾಗಿ ಮತ್ತೂ ಒಂದು ಎರಡರ ನಾಣ್ಯ ಕೇಳುವುದು ಹೆಚ್ಚೇ ಆದರೂ ಕೇಳಿದೆ- ಆಟೋ ರಾಜನಿಗೆ ಸರಿಯಾದ ಮೊತ್ತ ನೀಡುವ ಸಲುವಾಗಿ. ಅದಿನ್ನೂ ರಾಹು ಕಾಲವಾಗಿತ್ತೋ ಕಾಣೆ, ಅದೃಷ್ಟ ಪೂರ್ತಿ ಒಲಿಯಲಿಲ್ಲ. ಐದು ಹತ್ತು ಇಪ್ಪತ್ತಕ್ಕೇ ಅವನಿಗೆ ಥ್ಯಾಂಕ್ಸ್ ಎನ್ನಬೇಕಾಯಿತು. ಅದರಲ್ಲಿ ಮೂವತ್ತೈದನ್ನು ಆಟೋರಾಜನಿಗೆ ಅರ್ಪಿಸಿದೆ. ಎರಡು ರೂಪಾಯಿ ಮರಳಿ ಪಡೆಯುವ ಯಾವ ಲಕ್ಷಣವೂ ಕಾಣಲಿಲ್ಲ. ಮೂವತ್ತಮೂರು ರೂಪಾಯಿಗಳು  ಮೀಟರಿನದೆಂದೂ ಇನ್ನೆರಡು ಅವನ ರಥ ಹತ್ತಿದ ತಪ್ಪಿಗೆ ನಾನು ವಿಧಿಸುತ್ತಿರುವ ದಂಡವೆಂದೂ ಭಾವಿಸಿಕೊಂಡು ನಿಟ್ಟುಸಿರೆಳೆದು ಬಿಟ್ಟೆ. "ಹತ್ತೀ...ಹತ್ತೀ..." ಎಂದು ನನ್ನ ಒಂದೂವರೆ ವರ್ಷದವಳು ಸೊಂಟದಿಂದ ಜಾರುತ್ತಾ ರೋಡಿಗಿಳಿಯುವ ಪ್ರಯತ್ನ ಮಾಡಿರದಿದ್ದರೆ, ಬಟ್ಟೆಯಂಗಡಿಯ ಬೊಂಬೆಗಳ ಸಾಲಲ್ಲಿ ನಾನೂ ಒಬ್ಬಳಂತೆ ಇನ್ನೂ ಕೆಲ ಕ್ಷಣ ನಿಂತು ಬಿಡುತ್ತಿದ್ದೆ!
(ಇಳಿಯುವುದಕ್ಕೂ ಹತ್ತುವುದಕ್ಕೂ ಅವಳ ನಿಘಂಟಿನಲ್ಲಿ ಒಂದೇ ಶಬ್ದ- "ಹತ್ತೀ")

ಇನ್ನಿವರ ಸಹವಾಸ ಬೇಡ! ತಪ್ಪಿಯೂ ಮುಂದೆ ಆಟೋ ಮೆಟ್ಟಲಾರೆ ಎಂದು ಒಳ ಮನಸು ಪ್ರತಿಜ್ಞೆ ಮಾಡತೊಡಗಿತು. ಆದರೆ ಅದು ಅಷ್ಟು ಸುಲಭವೇ? ಬಂದ ಕೆಲಸವಾಯಿತು. ಮನೆಗೆ ಮರಳಬೇಡವೇ? ನಡೆದು ಹೋಗುವಷ್ಠು ಹತ್ತಿರವಲ್ಲ. ಅಭಯ ತಮ್ಮ ಕೆಲಸ ಮುಗಿಸಿ ಮರಳುವವರೆಗೂ ಕಾಯುತ್ತಾ, ಇಲ್ಲೇ ಸುತ್ತ ಮುತ್ತ ಸಮಯ ದೂಡಲು ಸಾಧ್ಯವೂ ಇಲ್ಲ! ಮತ್ತೆ ಈ ಕನ್ನಡದ ತೇರಿಗೇ ದಂಡ ತೆರಬೇಕಲ್ಲಾ? ಆಟೋ ಬಿಟ್ಟರೆ ಬೇರೆ ಆಯ್ಕೆ ಇಲ್ಲಿಲ್ಲವೇ ಇಲ್ಲ. ಓಲಾ ಆಟೋ ನಮ್ಮೇರಿಯಾದಲ್ಲಿ ಸಿಗದೆಂದು ಗೊತ್ತಿದ್ದರೂ ಮತ್ತೆ ಓಲಾ ಆಪ್ ತೆರೆದೆ. ನೋ ಆಟೋಸ್ ಎಂದು ನೋಡಿ, ಮನೆ ದಾರಿಯಲ್ಲಿ ನಡೆದೇ ಹೊರಟೆ. ಮಗಳ "ಹತ್ತೀ.." ರಾಗ ಮುಂದುವರೆಯುತ್ತಾ ಹೆಚ್ಚಾಗತೊಡಗಿತು. ನಡೆದು ಹೋಗುವುದಕ್ಕೆ ಅದಕ್ಕಿನ್ನೂ ಸಾಧ್ಯವಿಲ್ಲ. ಅವಳನ್ನು ಹೊತ್ತು ಮನೆ ತನಕ ನಡೆಯುವುದಕ್ಕೆ ನನಗೂ ಸಾಧ್ಯವಿಲ್ಲ. ಆದರೂ ನಡೆದೆ... ಒಂದಷ್ಟು ದೂರ- ಇನ್ನೊಂದು ಆಟೋ ಸಿಗುವವರೆಗೂ. ಮನಸು ಬೇಡ ಎಂದರೂ ಬೇರೆ ಆಯ್ಕೆ ಇಲ್ಲದೆ ಸಿಕ್ಕ ಆಟೋ ಬಿಟ್ಟರೆ, ಕಷ್ಟ ನನಗೇ ಅಲ್ಲವೇ ಎಂದು ಎದುರಿಗೆ ಬಂದ ಆಟೋ ಹತ್ತಿದೆ. ಐವತ್ತು ಎಂದ.  ತುಸು  ಹೆಚ್ಚೇ ಆದರೂ, ಆಮೇಲೆ ವಾಗ್ಯುದ್ಧ ಮಾಡುವುದಕ್ಕಿಂತ ಇದೇ ವಾಸಿ ಎಂದುಕೊಂಡೆ. ಆಗಿನವನು ಮೈನ್ ರೋಡಲ್ಲಿ ಸಿಕ್ಕವ. ಈಗಿನವನು ಅಪಾರ್ಟ್ ಮೆಂಟ್ ಬುಡದವರೆಗೂ ಬರುವವ.  ಸೋ, ಸುಮಾರು ನಲುವತ್ತಾದೀತು. ತೀರಾ ಮೋಸವೇನಲ್ಲ ಎಂದು ಮನಸೊಳಗೆ ಸಮಾಜಿಯಿಷಿ ಕೊಟ್ಟುಕೊಂಡೆ. ತುಸು ಸಮಾಧಾನವೆನಿಸಿತು. ಮಧ್ಯಾಹ್ನ ಹನ್ನೆರಡರ ಖಾಲೀತನ ನನ್ನ ಮನಸನ್ನೂ ಆವರಿಸತೊಡಗಿತು. ಇಷ್ಟು ಹೊತ್ತು ಅನುಭವಿಸಿದ ಭಾವಾವೇಷಗಳೆಲ್ಲಾ ಕರಗಿ ಮನಸು ತಿಳಿಯಾಗತೊಡಗಿತು. ಆ ಆಟೋದವನ ಮೊಂಡುತನ ನನ್ನನ್ನು ಎಫೆಕ್ಟ್ ಮಾಡಲು ನಾನು ಬಿಡಬಾರದಿತ್ತು. ಯಾರು ಹೇಗಾದರೂ ವರ್ತಿಸಲಿ, ನನ್ನ ಮನಸಿನ ಟೆಂಪರೇಚರ್ ಬದಲಾಗಬಾರದು ಎಂದು ನನಗೆ ನಾನೇ ತಿಳಿಹೇಳೀಕೊಂಡೆ. ವಿನಾಕಾರಣ ಈ ಒತ್ತಡವನ್ನು ಅಭಯನವರೆಗೂ ವಿಸ್ತರಿಸಿಬಿಟ್ಟೆನಲ್ಲಾ ಎಂದು ಈಗ ಬೇಸರವಾಗತೊಡಗಿತು. Its okay! ಗಂಡನಲ್ಲವೇ? ನನ್ನೆಲ್ಲಾ ಸಿಟ್ಟಿಗೂ ದುಃಖಕ್ಕೂ ಗುರಿಯಾಗುವುದು ಅವರ ಆಜನ್ಮ ಸಿದ್ಧ ಹಕ್ಕು. ಅದನ್ನೇಕೆ ಕಸಿಯಲಿ? ಅವರ ಸ್ಪೇಸನ್ನು ಅವರಿಗೆ ಬಿಟ್ಟು ನಾನು ಹೀಗೆ ಒಬ್ಬಳೇ ಅಲೆಯುತ್ತಿಲ್ಲವೇ? ಎಷ್ಟೋ ಬಾರಿ ಅವರ ಕೆಲಸದ ಒತ್ತಡಗಳಲ್ಲಿ ನಾನೂ ಪಾಲು ಪಡೆಯುವುದಿಲ್ಲವೇ ಎಂಬ ಜಸ್ಟಿಫಿಕೇಶನ್ ಗಳನ್ನು ಕೊಡುತ್ತಲೇ, ಮನೆ ಕಡೆ ತಿರುಗುವ ಎಡ ತಿರುವು ಬಂತು. ಇಲ್ಲೇ ಲೆಫ್ಟ್ ಹೋಗಿ ಎಂದು ಆಟೋದವನಿಗೆ ಹೇಳುವಲ್ಲಿಗೆ, ಮನಸಿನ ಲಹರಿಗೆ ಕಡಿವಾಣ ಹಾಕಿದೆ. ಆಟೋದವನು ಮೊದಲೇ ನಿಗದಿ ಪಡಿಸಿದ ಐವತ್ತಕ್ಕಾಗಿ ಪರ್ಸ್ ತಡಕಾಡಿದೆ. ನಲುವತ್ತಷ್ಟೇ ಇತ್ತು. ಮಿಕ್ಕಿದ್ದು ಐನೂರರ ನೋಟು. ಸೋತೆ ನಾನು. ಮತ್ತೆ ಇವನಿಗೆ ಐನೂರು ಕೊಟ್ಟು ಹಳೆಯ ಸೀನ್ ಮರುಕಳಿಸುವಂತೆ ಮಾಡಲೇ? ನೋ ವೇ ಎಂದುಕೊಂಡು,  ನಲುವತ್ತು ಅವನ ಕೈಗಿತ್ತು "ಎರಡ್ ನಿಮ್ಷ ಇರಿ, ಹತ್ತು ರೂಪಾಯಿ ಮನೆಯಿಂದ ತಂದ್ಕೊಡ್ತೀನಿ" ಎಂದೆ. ಅವನಿಗೇನನಿಸಿತೋ, "ಮತ್ತೆ ಆ ಕಡೆ ಬರ್ತೀರಲ್ಲಾ ಮೇಡಮ್... ಅವಾಗ್ ಕೊಡಿ ಸಾಕು" ಎಂದ. "ಮತ್ತೆ ಯಾವಾಗ ಬರ್ತೀನೋ ಗೊತ್ತಿಲ್ಲ. ತಡೀರಿ ತಗೊಂಡ್ ಬರ್ತೀನಿ" ಎಂದು ಮತ್ತೆ ಹೇಳಿದೆ. "ಒಂದ್ ಐದ್ ಹತ್ರುಪಾಯಿ ಆ ಕಡೆ ಈಕಡೆ ಆಗ್ತಿರತ್ತೆ ಮೇಡಮ್... ಪರವಾಗಿಲ್ಲ ನೆಕ್ಸ್ಟ್ ಟೈಮ್ ಕೊಡಿ" ಎಂದು ನಸು ನಕ್ಕು ಹೋದ. ನಿಜದಲ್ಲಿ ಅವನು ಕಳಕೊಂಡದ್ದು ಏನೂ ಇಲ್ಲ. ಅಲ್ಲಿಂದಿಲ್ಲಿಗೆ ಬರಲು ವಾಸ್ತವವಾಗಿ ಎಷ್ಟು ತಗುಲುವುದೋ ಅದಕ್ಕಿಂತ ಒಂದೆರಡು ರೂಪಾಯಿ ಹೆಚ್ಚೇ ಪಡೆದಿರುತ್ತಾನೆ. ಬಿಟ್ಟಿಯಾಗಿ ಉದಾರಿಯಾದನಲ್ಲಾ ಎಂದುಕೊಂಡು ನಾನೂ ನಸು ನಕ್ಕೆ!

ಅಲ್ಲಿಗೆ, ಇನ್ನು ಮುಂದೆ ಆಟೋ ಹತ್ತಲಾರೆ ಎಂಬ ಪ್ರತಿಜ್ಞೆ ಪಂಚಭೂತಗಳಲ್ಲಿ ಲೀನವಾದಂತೆಯೇ. ಇನ್ನೊಂದು ದಿನ ಮತ್ತೊಂದು ಆಟೋ. ಮತ್ತೆ ಹೊಸ ಕಥನ. ಬಿಗ್ ಬಾಸ್ಕೆಟ್, ಅಮೆಜ಼ಾನ್, ನಿಂಜಗಳನ್ನೇ ನೆಚ್ಚಿಕೊಂಡಿದ್ದರೆ ಈ ಅನುಭವಗಳು ಸಿಗುತ್ತಿತ್ತೇ? ದಿನ ದಿನ ಮನೆಗೆ ಬಂದು ಹಂಚಿಕೊಳ್ಳಲು ಹೊಸ ಕಥೆಗಳು ಸಿಗುತ್ತಿದ್ದುವೇ? ಆದ್ದರಿಂದ, ಕಷ್ಟವಾದರೂ, ಒಮ್ಮೊಮ್ಮೆ ಬೇಡವೆನಿಸಿದರೂ ಈ ಪಯಣ ಮುಂದುವರೆಯುತ್ತಲೇ ಇದೆ. ನನ್ನ ಸುತ್ತಲಿನ ವಾಸ್ತವವನ್ನು ಅರಿಯಲು, ಸೋಲದೇ ಇರುವುದನ್ನು ಕರಗತ ಮಾಡಿಕೊಳ್ಳಲು. ಒಮ್ಮೊಮ್ಮೆ ಜಗತ್ತು ಅಷ್ಟೊಂದೇನೂ ಕೆಟ್ಟು ಹೋಗಿಲ್ಲವೆಂದು ತಿಳಿಯಲೂ ಹೌದು! ಇಂಥದ್ದೇ ಮತ್ತೊಂದು ತಡ ಮಧ್ಯಾಹ್ನ ಹೊರಟದ್ದು ಆಭಾಳ ಹೇರ್ ಕಟ್ ನೆಪದೊಂದಿಗೆ. ಅದೇನು ಟ್ರಾಫಿಕ್ ಆ ದಿನ! ವಿಷ್ಣು ವರ್ಧನ ರಸ್ತೆಗೆ ಪುರುಸೊತ್ತಿಲ್ಲ. ಒಂದೆಡೆ ಶರವೇಗದ ಬೈಕುಗಳು, ಮತ್ತೊಂದೆಡೆ ವೇಗದೂತ ಬಸ್ಸುಗಳು. ಇವುಗಳ ಮಧ್ಯೆ ಕರ್ಕಶವಾಗಿ ಹಾರನ್ ಹಾಕುತ್ತಾ ಧೂಳು ಹಾರಿಸಿಕೊಂಡೇ ಹೋಗುವ ಲಾರಿಗಳು. ಒಂದು ಹೆಜ್ಜೆ ಮುಂದಿಟ್ಟರೆ ಬೆಚ್ಚಿ ಬಿದ್ದು ಹತ್ತು ಹೆಜ್ಜೆ ಹಿಂದಕ್ಕೋಡುತ್ತಿದ್ದೆ. ಅಫ್ ಕೋರ್ಸ್, ಸೊಂಟದಲ್ಲಿ ಆಭಾಳನ್ನು ಏರಿಸಿಕೊಂಡೇ. ಈಗ ಅವಳಿಗೂ ಅಭ್ಯಾಸವಾಗಿದೆ. ಟ್ರಾಫಿಕ್ಕಲ್ಲಿ ನೋ "ಹತ್ತೀ.. ಹತ್ತೀ" ರಾಗ. ಸುಮ್ಮನಿರುತ್ತಾಳೆ. ಆದರೆ ಸಾಗರದೋಪಾದಿಯಲ್ಲಿ ತುಂಬಿರುವ ಈ ರಸ್ತೆಯನ್ನು ದಾಟಲಿ ಹೇಗೆ? ಆಗುತ್ತಿಲ್ಲ ಎನಿಸಿತು. ಹಾಗೇ ನಿಂತೆ. ಆಗಲೇ ಗಮನಿಸಿದ್ದು ಅಲ್ಲಿರುವ ಪೋಲೀಸರ ಹಿಂಡನ್ನು. ಎಂದೂ ಇಲ್ಲದವರು ಇಂದೇಕೆ ಇಲ್ಲಿದ್ದಾರೆಂದು ಮನಸು ಮಂಥಿಸತೊಡಗಿತು. ಲೈಸೆನ್ಸ್ ಇಲ್ಲದ ಗಾಡಿ ಹಿಡಿಯುವುದಕ್ಕೋ... ಏನಾದರೂ ಕಳ್ಳ ಸಾಗಣೆಯ ಲಾರಿಗಳನ್ನು ಹಿಡಿಯುವುದಕ್ಕೋ ಇರಬಹುದು. ಯಾತಕ್ಕಾದರೂ ಆಗಿರಲಿ, ಸದ್ಯಕ್ಕೆ ನನಗೆ ರಸ್ತೆ ದಾಟಬೇಕು. ಹೆಜ್ಜೆ ಮುಂದಿಡುವುದು ಹಿಂದಿಡುವುದು ಬಿಟ್ಟು ಓಡಿ ಹೋಗಿ ಇನ್ನೊಂದು ತೀರ ಸೇರಬೇಕು. ಹಲವಾರು ನಿಮಿಷಗಳೇ ಆದುವು. ದಾಟಲಾಗುತ್ತಿಲ್ಲ. ಹತಾಶೆ ಆವರಿಸತೊಡಗಿತು. ನಿಜಕ್ಕೂ ರಸ್ತೆ ದಾಟಲಾಗದಷ್ಟು ವಾಹನ ದಟ್ಟಣೆ ಇದೆಯೇ ಅಥವಾ ರಸ್ತೆ ದಾಟುವ ಕಲೆ ನನಗಿಲ್ಲವೇ ಎನಿಸತೊಡಗಿತು. ಇದೊಂದು ಕೊನೆಯ ಪ್ರಯತ್ನ, ಆಗಿಲ್ಲವಾದರೆ ಮನೆಗೆ ಮರಳುತ್ತೇನೆ ಎಂದುಕೊಳ್ಳುವಷ್ಟರಲ್ಲಿ, "ಈಗ್ ಹೋಗಿ ಮೇಡಮ್... ಹೋಗಿ ಮೇಡಮ್.... ಏನೂ ಆಗಲ್ಲ ಹೋಗಿ ಹೋಗಿ ಹೋಗಿ.." ಎನ್ನುತ್ತಾ ಪೋಲೀಸರಲ್ಲೊಬ್ಬ ಕೂಗಿ ಹೇಳಿದ..ವಾಹನಗಳನ್ನು ತಡೆಯುವಂತೆ ಸಂಜ್ಞೆ ಮಾಡಿದ. ಮರು ಯೋಚನೆ ಮಾಡದೇ, ಗಾಡಿಗಳು ಬರುತ್ತಿವೆಯೋ ಇಲ್ಲವೋ ಎಂಬುದನ್ನೂ ನೋಡದೇ ಅವನೊಬ್ಬನನ್ನೇ ನಂಬಿ ಓಡಿದೆ. ದಡ ತಲುಪಿದೆ. ವಾಕಿ ಟಾಕಿ ಹಿಡಿದು ಇನ್ಯಾರದೋ ಜೊತೆ ಏನೋ ಬ್ಯುಸಿ ಸಂಭಾಷಣೆ ನಡೆಸುತ್ತಿದ್ದ ನಡುವೆಯೂ ನನಗೆ ಸಹಾಯ ಮಾಡಿದ ಆತನಿಗೆ ಹಿಂದಿರುಗಿ ಥ್ಯಾಂಕ್ಸ್ ಹೇಳಲು ಮರೆಯಲಿ ಹೇಗೆ? ದೂರದಿಂದಲೇ ಥ್ಯಾಂಕ್ಯೂ ಸರ್ ಎಂದು ಕೂಗಿದವಳೇ ಆಟೋ ಹಿಡಿಯಲೆಂದು ದಾಪುಗಾಲು ಹಾಕಿದೆ. ನನಗೆ ಸಹಾಯ ಮಾಡಿದ ಪೋಲೀಸಪ್ಪನಿಗೆ  ಮತ್ತೆ  ಮನಸಲ್ಲೇ ಕೃತಜ್ಞತೆ ಸಲ್ಲಿಸಿದೆ. ಆ ಕ್ಷಣ, ನನ್ನನ್ನು ರಸ್ತೆ ದಾಟಿಸುವುದಕ್ಕಾಗಿಯೇ ಇಂದವರು ಇಲ್ಲಿದ್ದರು ಎನಿಸಿಬಿಟ್ಟಿತು! ಖಾಲೀ ಆಟೋ ಬಂದು ಹತ್ತಿರ ನಿಂತಲ್ಲಿಗೆ ಯೋಚನೆಗಳಿಗೆ ಪುಲ್ ಸ್ಟಾಪ್ ಹಾಕಿ,  "ರಾಜರಾಜೇಶ್ವರಿ ನಗರ?" ಎಂದು ಕೇಳಿದೆ. "ನಲುವತ್ತು" ಎಂದ. ಅಚ್ಚರಿಯಾಯಿತು. ಇವನ್ಯಾರೋ ಹರಿಶ್ಚಂದ್ರನಂತೆ, ಬಂಗಾರದ ಮನುಷ್ಯನಂತೆ ಕಂಡ. ಅಪ್ಪಟ ರಾಜ್ ಕುಮಾರ್ ನಂತೆ ಕಂಡ ಎಂದರೂ ಸರಿ ಹೋಗುತ್ತದಲ್ಲವೇ? ಸಾಮಾನ್ಯವಾಗಿ ಆರ್.ಆರ್ ನಗರ ಎಂದೊಡನೆಯೇ ಎಪ್ಪತ್ತು, ಎಂಭತ್ತು ಎಂಬರು. ಎಲ್ಲೋ ಲಕ್ ಭಾರೀ ಸ್ಟ್ರಾಂಗ್ ಇದ್ದರೆ ಮೀಟರಲ್ಲಿ ಬರುವರು. ಮೀಟರ್ ಕಾಸು ಕೊಟ್ಟ ಮೇಲೆ ಗೊಣಗುತ್ತಾ ಕೆಟ್ಟ ಚಹಾ ಕುಡಿದಂದದ ಮುಖ ಮಾಡಿ ಸಾಗುವರು. ಮೀಟರ್ ಹಾಕಿ ಹೋದರೆ ಹೆಚ್ಚೂ ಕಮ್ಮಿ ಮೂವತ್ತೆಂಟು-ಮೂವತ್ತೊಂಭತ್ತಾಗುವುದು ನನಗೆ ಗೊತ್ತಿದೆ. ಅಂಥದ್ದರಲ್ಲಿ ಈತ ನಿಖರವಾಗಿ ನಲುವತ್ತು ಎಂದದ್ದು ಆಶ್ಚರ್ಯವೇ ಆಯ್ತು. ಸುಮ್ಮನೇ ಮಾತಿಗೆಳೆದೆ. ಮೀಟರ್ ನಲ್ಲಿ ಬರೋಲ್ಲವೇ ಎಂದೆ. "ಲೋಕಲ್ ತಾಯೀ... ಮೀಟರ್ ಎಲ್ಲಾ ನಡ್ಯಲ್ಲ. ಮೀಟರ್ ಅಂದ್ರೆ... ಇನ್ನೊಂದ್ ಸ್ವಲ್ಪ ಮುಂದಕ್ಕೋದ್ರೆ ಐವತ್ ಬೀಳತ್ತೆ... ಯಾಕ್ ಸುಮ್ನೇ... ಎಲ್ಲೋ ಐದತ್ತು ಹಿಂಗೇ ಅಜಸ್ಟ್ ಮಾಡೋದೇ ವಾಸಿ..."
"ಹಾಗಾದ್ರೆ ನೀವ್ ನಂಗೆ ಡಿಸ್ಕೌಂಟ್ ಕೊಡ್ತೀರಿ...?"
"ಡಿಸ್ಕೌಂಟ್ ಅಂತಲ್ಲ... ಅದೇ.. ಐದತ್ತು ಆ ಕಡೆ ಈ ಕಡೆ...ನಮ್ಗೂ ನಿಮ್ಗೂ ಇಬ್ರಿಗೂ ಲಾಸಿಲ್ಲ.."  ನಕ್ಕ.
ನಾನೂ ನಸು ನಕ್ಕೆ. ಇವನ್ ಪಾಲಿಸಿ ಸರಿಯೇ ಇದೆ ಎನಿಸಿತು.
"ನೀವು ಸೇಟುಗಳಾ?" ಮುಂದುವರೆಸಿದ
"ಅಲ್ಲ.."  ಎಂದೆ. ಅಲ್ಲದೆ ಇನ್ನೇನೆಂದು ತಿಳಿಯುವ ನಿರೀಕ್ಷೆ ಆತನಿಗಿತ್ತೋ  ಗೊತ್ತಿಲ್ಲ. ಆದರೆ ಹೇಳುವ ಇಛ್ಛೆಯಂತೂ ನನಗಿರಲಿಲ್ಲ. ಸುಮ್ಮನಾದೆ. ಅವನೇ ಮತ್ತೆ ಮುಂದುವರಿಸಿದ.
"ಮಂಗ್ಳೂರ್ ನೋರಾ?"
"ಹೌದು. ಭಾಷೆಯಿಂದ ಕಂಡು ಹಿಡಿದ್ರಾ?"
"ಹೂ ತಾಯೀ.. ಏನ್ ಮಗೀಗ್ ಇಂಜೆಕ್ಷನ್ನಾ?"
"ಇಲ್ಲ. ಹೇರ್ ಕಟ್"
"... ಇದುಕ್ ಹೇರ್ ಕಟ್ ಬೇರೆ ಆಬೇಕಲ್ಲಾ..." ನಕ್ಕ. "ಇಲ್ ಮನೇ ಸ್ವಂತಾನಾ?"
"ಹೂಂ"
"ಯಜಮಾನ್ರು...? ಏನ್ ಕೆಲ್ಸ ಮಾಡ್ಕಂಡವ್ರೆ..."
"ಅವ್ರು ಫಿಲ್ಮ್ ಫೀಲ್ಡಲ್ಲಿದ್ದಾರೆ. ಸಿನೆಮಾ ಡೈರೆಕ್ಟ್ ಮಾಡ್ತಾರೆ" ಅವರೇನು ಕೆಲಸ ಮಾಡ್ತಾರೆಂಬ ಅವನ ಕುತೂಹಲಕ್ಕೆ ನನ್ನದೇನೂ ತಕರಾರಿಲ್ಲ. ಇದನ್ನು ಅಭಯನೊಡನೆ ಹೇಳಿಕೊಂಡರೆ ಅವರಿಗೂ ಏನೂ ಅನಿಸದು. ಆದರೆ ಈ "ಯಜಮಾನನೆಂಬ" ಪದ ಬಳಕೆಯ ಬಗ್ಗೆ ಅವರಿಗೆ ವಿಪರೀತ ವಿರೋಧವಿದೆ. ಈತ ಆ ಪದ ಬಳಸಿದಾಗ ಅಭಯ ಹಿಂದೆ ಆಡಿದ ಮಾತುಗಳು ನೆನಪಾದವು. "ಈ ಬೆಂಗ್ಳೂರಿನೋರಿಗೆ ಗಂಡ ಯಜಮಾನನಾಗೋದು ಹೇಗೆ? I belong to you, and you belong to me. We live together. ಅಷ್ಟೇ! In any way I dont own you" ಎನ್ನುತ್ತಿದ್ದರು ಅಭಯ. ಅದನ್ನೆಲ್ಲಾ ಇವನಿಗೀಗ ವಿವರಿಸಲಾರೆ ನಾನು. ನೆನಪಾಯಿತು ಅಷ್ಟೇ. ಈ ಯೋಚನೆ ಹೆಚ್ಚು ಮುಂದುವರಿಯುವುದಕ್ಕೆ ಈತ ಬಿಡಲಿಲ್ಲ ಬಿಡಿ. ಮಾತನಾಡುತ್ತಲೇ ಇದ್ದ.
"ಫಿಲಮ್ ಅಂದ್ರೆ... ಸಿಕ್ಕಾಪಟ್ಟೆ ಬ್ಯೂಸಿ ಇರ್ತಾರಲ್ವಾ?"
"ಹೂ. ಬ್ಯೂಸಿನೆ"
"ನೀವು ಊರಿಗ್ ಗೀರಿಗ್ ಹೋದ್ರೆ ಅವಾಗ್ ಪ್ರಾಬ್ಲೆಮ್ಮು.. ಊಟಕ್ಕೆಲ್ಲಾ.."
"ಹಾಗೇನಿಲ್ಲ.. ಹೊರಗಡೆ ತಿನ್ನೋದು ಅವರಿಗೇನೂ ಬೇಜಾರಿಲ್ಲ..."
".. ಮತ್ತೆ.. ಸಿನೆಮಾದೋರಲ್ವಾ.. ಹೆಂಗ್ ಬೇಕಾನಾ ಬದ್ಕಕ್ ಬರತ್ತೆ... ಬೆಂಗ್ಳೂರೆಲ್ಲಾ ನಿಮಗ್ ಹೆಂಗೆ... ಸರೋಗುತ್ತಾ...?"
"ಹತ್ ವರ್ಷ ಆಗ್ತಾ ಬಂದು. ಈಗ್ ಇದೂ ನಮ್ಮೂರೇ!"
"... ಮದ್ವೇ ಆಗ್ ಹತ್ತೋರ್ಷ ಆಗೋದ್ವೇ.. ನೋಡಕ್ ಇನ್ನೂ ಚಿಕ್ ಉಡ್ಗಿ ಇದ್ದಂಗಿದೀರಾ...!" ಕೂಡಲೇ ತಪ್ಪಿತಸ್ಥನಂತೆ ಸಂಭಾಳಿಸಿಕೊಂಡ, "ಬೇಜಾರ್ ಮಾಡ್ಕಂಬೇಡಿ ಮತ್ತೆ.. ನಂಗೂ ನಿಮ್ಮಂಗೇಯಾ ಮಗಳವ್ಳೆ.. ಮೊಮ್ಮಗಳೂ ಅವ್ಳೆ.. ಇಂಚರ ಅಂತ ಮೊಮ್ಮಗಳು.. ವಂದನಾ ಅಂತ ಮಗಳು..."
"ಇಲ್ಲ.. ಇಲ್ಲ.. ಬೇಜಾರೇನಿಲ್ಲ...
"ದೇವರ್ ದಯದಿಂದ ಚೆನ್ನಾಗಿದಾರೆ ಮಗಳು ಅಳಿಯ ಮೊಮ್ಮಗಳು... ಹದ್ಮೂರ್ ಲಕ್ಷ ಖರ್ಚ್ ಮಾಡಿ ಮದ್ವೆ ಮಾಡ್ ಕೊಟ್ಟೊ.. ಚೆನ್ನಾಗವ್ಳೆ... ಚೆನ್ನಾಗವ್ಳೇ..."
ಛೇ! ಎನಿಸಿತು... ಹದಿಮೂರು ಲಕ್ಷ ಖರ್ಚಾಗದ ಮದುವೆಯಾಗಿಯೂ ಚೆನ್ನಾಗಿರುವುದು ನಮ್ಮ ಗುರಿಯಾಗಬೇಕಲ್ಲವೇ ಎನಿಸಿತು. ಅದನ್ನು ಈತನಿಗೆ ಹೇಳಲೇ? ಬೇಡ ಎನಿಸಿತು. ಅವನ ನಂಬಿಕೆ ಹಾಗಿದ್ದರೆ ಅದನ್ನೇಕೆ ಪ್ರಶ್ನಿಸಲಿ... ಸುಮ್ಮನಾದೆ. ಆತ ಮುಂದುವರಿಸಿದ,
"ನಮಗ್ ಮಾತ್ರ ಸ್ವಲ್ಪ್ ಕಷ್ಟ ಇವಾಗ... ಹದ್ಮೂರ್ ಲಕ್ಷ ಸಾಲ ಮಾಡ್ದೊಲ್ಲಾ.. ಅದೊಂದಿದೆ.. ನೋಡಾದಾ... ಮೇಲ್ ದೇವ್ರಿದಾನೆ.. ನಂಬಿರೋ ಕೆಲ್ಸ ಕೈಲಿದೆ.. ಮಾಡಾದಾ.."
ಮತ್ತೆ ಛೇ ಎನಿಸಿತು. ಮದುವೆಗಾಗಿ ಹದಿಮೂರು ಲಕ್ಷ ಸಾಲ ಮಾಡಿದರಲ್ಲಪ್ಪಾ ಎಂದು ಮನಸು ಮರುಗಿತು. ಈ ನಿಮ್ಮ ಒಳ್ಳೆತನವೇ ನಿಮ್ಮ ಮಗಳ ಬದುಕು ಚೆನ್ನಾಗಿರುವಂತೆ ಮಾಡುತ್ತಿತ್ತು. ಹೀಗೇಕೆ ಸಾಲ ಮೈ ಮೇಲೆ ಎಳಕೊಂಡಿರಿ ಎಂದು ಕೇಳಬೇಕೆನಿಸಿತು. ಹಾಗೆಲ್ಲಾ ಆಡಲು ಮಾತು ಹೊರಡಲೇ ಇಲ್ಲ. ಸುಮ್ಮನೇ ಇದ್ದೆ. ಆತ ಬಿಡಲಿಲ್ಲ. ಮತ್ತೆ ಮುಂದುವರಿಸಿದೆ.
"ಮಗ್ಳು ಚೆನ್ನಾಗವ್ಳಲ್ಲಾ... ಅಷ್ಟ್ ಸಾಕ್! ನಮ್ದ್ ಹೆಂಗೋ ನಡೀತದೆ..."
ಮತ್ತೆ ಬೇಸರವೆನಿಸಿತು. ಸಾಲ ಸೋಲ ಮಾಡಿ ಅದ್ಧೂರಿ ಮದುವೆ ಮಾಡಿಕೊಡುವ ಅನಿವಾರ್ಯತೆಯಾದರೂ ಯಾಕೆ ಎದುರಾಗುತ್ತದೆ ಈ ದುಡಿದು ತಿನ್ನುವ ಜೀವಗಳಿಗೆ? ಅದೇ ಶ್ರೇಷ್ಠ ಎಂದು ಇವರ ತಲೆ ಒಳಗೆ ತುಂಬಿಸಿಟ್ಟವರು ಯಾರು? ಛೇ ಎಂದುಕೊಂಡೆ. ಬಲ ಬದಿಗೆ ಇವಳನ್ನು ಕರೆದೊಯ್ಯಬೇಕಿದ್ದ ನ್ಯಾಚುರಲ್ಸ್ ಸಲೂನ್ ಕಂಡಿತು. ಆತನೂ ಗಮನಿಸಿದ ಎನಿಸುತ್ತದೆ. ಮಾತು ಮುಗಿಸುವವನಂತೆ,
"ಯೂ ಟರ್ನ್ ತಗೊಂಡ್ ಅಲ್ಲೇ ಬಿಡ್ತೀನಿ.. ನಾ ಇನ್ನೂ ಈ ಏರಿಯಾದಲ್ಲೇ ಓಡಾಡ್ಕೊಂಡ್ ಇರ್ತೀನಿ.. ನಮ್ ಹೆಂಗಸ್ರು ಬತ್ತಾವ್ರೆ. ಬಿಡದಿಯಿಂದ. ಕೈಲೊಂದಷ್ಟ್ ಸಾಮಾನು.. ಗೋಧಿ, ಅಕ್ಕಿ ಎಲ್ಲಾ ಅವೆ.. ಪಾಪಾ ನಾ ಓಗಿಲ್ಲಾಂದ್ರೆ ಬಸ್ ಅತ್ಕೊಂಡ್ ಓಗತ್ತೆ. ಕಷ್ಟ ಪಡತ್ತೆ... ಅವರ್ ಬಾವ ಕೆಂಗೇರಿಗಂಟ ಬುಡ್ತಾರೆ. ಅಲ್ಲೀಗ್ ಹೋಗ್ ಕರ್ಕೊಂಡ್ ಬತ್ತೀನಿ.."
ಓಹ್. ತನ್ನ ದುಡಿಮೆಯ ಮಧ್ಯೆ ಹೆಂಡತಿ ಕಷ್ಟ ಪಡದಿರಲೆಂಬ ಆತನ ಕಾಳಜಿಗೆ ಮನಸು ಒದ್ದೆಯಾಯಿತು. ಆತ ನಿಗದಿ ಮಾಡಿದಂತೆ ನಲುವತ್ತು ಅವನ ಕೈಗಿತ್ತೆ.
"ಒಳ್ಳೇದು ತಾಯೀ.." ಎಂದವನೇ ಸಹೃದಯನಂತೆ ನಗೆ ದಾಟಿಸಿ ಹೊರಟ.
ತನ್ನ ಸಾಲವೊಂದು ಹೊರೆ ಎಂಬಂತಾಗಲೀ, ಆಟೋ ಓಡಿಸಿಯೇ ಅಷ್ಟೊಂದು ಸಾಲ ತೀರಿಸಬೇಕೆಂಬ ಕೊರಗಾಗಲೀ ಅವನಲ್ಲಿ ಕಾಣಲೇ ಇಲ್ಲ. ಅವನ ಬದುಕನ್ನು ಒಪ್ಪಿಕೊಂಡಿದ್ದಾನೆ; ಬಂದದ್ದನ್ನು, ಬರುತ್ತಿರುವುದನ್ನು ಸಹಿಸಿಕೊಂಡಿದ್ದಾನೆ. ತನ್ನವರಿಗಾಗಿ ಮಿಡಿಯುತ್ತಾನೆ. ಬದುಕುವುದೆಂದರೆ ಹೀಗೆಯೇ ಅಲ್ಲವೇ? ಇದ್ದಲ್ಲಿ ಅರಳುವುದು, ಸಾಧ್ಯತೆಗಳನ್ನು ವಿಸ್ತರಿಸುವುದು, ಒಳ್ಳೆಯದನ್ನು ಪಸರಿಸುವುದು, ನಮ್ಮವರನ್ನು ತಲುಪುವುದು ಮತ್ತು ಬದುಕುತ್ತಿದ್ದೇನೆಂದು ನಂಬುವುದು!

ರಾಜರಾಜೇಶ್ವರಿ ನಗರದ ಡಬಲ್ ರೋಡಿನ ಮರಗಳ ಮರೆಯಿಂದ ಸಂಜೆ ಸೂರ್ಯ ಕೆಂಪಾಗಿ ಕಂಡ. ಅದೆಷ್ಟು ಬದುಕುಗಳನ್ನು ತಲುಪುವುದಲ್ಲಾ ಸೂರ್ಯ ಕಿರಣಗಳು ಎಂಬ ಬೆರಗಿನೊಂದಿಗೆ ನ್ಯಾಚುರಲ್ಸ್ ಒಳ ನಡೆದೆ. ಪ್ರಕೃತಿದತ್ತವಾದ  ಬಂಗಾರದ ಬೆಳಕಿಗೆ ಅವಕಾಶವೇ ಇಲ್ಲವೆಂಬಂತೆ ನ್ಯಾಚುರಲ್ಸ್ ಒಳಗಿನ ಕೃತಕ ಬೆಳಕು ಝಗಮಗಿಸುತ್ತಿದ್ದವು. ಹೊಸ ಜಾಗ, ಹೊಸ ನೋಟದಿಂದ ನನ್ನ ಆಭಾಳ ಪುಟ್ಟ ಕಂಗಳೂ  ಕೌತುಕ  ತುಂಬಿ ಮಿನುಗಿದವು.

*ರಶ್ಮಿ*

Comments

  1. ಇಂಥ ಬರೆಹಗಳು ಅಪರೂಪವಾಗುತ್ತಿರುವ ಇಂದಿನ ದಿನಗಳಲ್ಲಿ ಇದನ್ನು ಓದಿ ಆನಂದವಾಯಿತು

    ReplyDelete
  2. ತುಂಬಾ ಲಾಯಿಕ ಇದ್ದು.

    ReplyDelete
    Replies
    1. Thanks a lot ಅತ್ತೆ ������

      Delete
  3. "ಧರಣಿಗೆ ಗಿರಿ ಭಾರವೇ... ಗಿರಿಗೆ ಮರವು ಭಾರವೇ.." ಎಂದು ಬರೆಯುವ ಹೊತ್ತಲ್ಲಿ ಚಿ.ಉದಯ ಶಂಕರರು ಮಗ್ಗುಲಲ್ಲಿ ಮಗುವನ್ನೂ ಇರಿಸಿಕೊಂಡಿದ್ದರೆ ಮೂಡುತ್ತಿದ್ದ ಸಾಹಿತ್ಯವೇ ಬೇರೆಯಾಗುತ್ತಿತ್ತೋ ಏನೋ! "
    ಬಹಳ ದಿನಗಳ ನಂತರದ ಬರವಣಿಗೆ...ಚೆನ್ನಾಗಿದೆ...ಮುಂದುವರೆಯಲಿ.

    ReplyDelete
  4. Thumba chennagitthu. :-)

    ReplyDelete
  5. ಚೆನ್ನಾಗಿದೆ ರಶ್ಮಿ, ಮುಂದಿನ ಬರಹಕ್ಕೆ ಕಾಯುತ್ತಿದ್ದೇನೆ...

    ReplyDelete
  6. Aabhalannu nibhaayisthaa inthaha baravanige saahasada kelasa Rashmi.

    ReplyDelete
  7. ಆತ್ಮವ್ಯಥಾನಕವನ್ನು ಅನಾವರಣ ಮಾಡಹೊರಟಂತೆ ತೊಡಗಿದರೂ ಅಲ್ಲಲ್ಲೇ ಎದುರು ವಾದಗಳಿಂದ ಸ್ಥೈರ್ಯ ಉಳಿಸಿಕೊಳ್ಳುತ್ತಾ ಬಂದು, ಓರ್ವ ಆಟೋರಾಕ್ಷಸನ ಅನುಭವದಿಂದ ಸಾಮಾನ್ಯೀಕರಣದ ತಪ್ಪು ಮಾಡಲು ಹೊರಟು, ದ್ವಿಗುಣ ಒಳ್ಳೇದನ್ನು ಕಂಡು ಎಲ್ಲಕ್ಕೂ ಮಂಗಳ ಹಾಡಿದ ಪರಿ ತುಂಬ ಪರಿಣಾಮಕಾರಿಯಾಗಿದೆ. ಅದು ಎಲ್ಲ ಭಾವಗಳಿಗೂ ಆಶ್ರಯದಾತ ವಟವೃಕ್ಷ ಎಂದೂ ಭಾವಿಸುವಂತಾದಾಗ, ಹೀಗೇ ಅನೇಕಾನೇಕ ಆಟೋ (ಚಾಲಕರ) ಅನುಭವಗಳನ್ನು ಫೇಸ್ ಬುಕ್ಕಿನಲ್ಲಿ ನಿತ್ಯ ಎನ್ನುವಂತೆ ಹಂಚಿಕೊಳ್ಳುವ ಬಿವಿ ಭಾರತಿಯವರ ನೆನಪೂ ಆಗದಿರಲಿಲ್ಲ. ಬರಲಿ ಹೀಗೂ ಇನ್ನಷ್ಟೂ... :-)

    ReplyDelete
    Replies
    1. ನಿಜ. Black & white ನಡುವಿನ grey area ಕಾಣಲು ಇಂತಹ ಘಟನೆಗಳು ಮತ್ತದು ನೀಡುವ ಅನುಭವ ಸಹಾಯ ಮಾಡುತ್ತವೆ. ಓದಿ ಪ್ರತಿಕ್ರಿಯಿಸಿದ್ದಕ್ಕೆ ಥ್ಯಾಂಕ್ಯೂ !

      Delete

    2. ನೀವು ಹೇಳಿದಂತೆ ಜೀವನದ ಸೊಗಸಿರುವುದು ಬಂದುದನ್ನು ನಡೆಸಿಕೊಂಡು ಹೋಗುವುದರಲ್ಲಿ. ನಮ್ಮ ಕಾಲದಲ್ಲಿ ನಾವು ಇಲ್ಲಿ ಹೇಳಿದ ಎಲ್ಲಾ ಸಮಸ್ಯೆಗಳೊಂದಿಗೆ ಮಕ್ಕಳನ್ನು ಬೆಳೆಸಿದೆವು, ದೊಡ್ಡದೋ ಸಣ್ಣದೋ ಕರ್ತವ್ಯಗಳನ್ನು ಮಾಡಿದೆವು. ಸಮಸ್ಯೆಗಳು ರೂಡಿಯಾದ ಮೇಲೆ ನಮಗೆ ಸಹಜವಾಗಿ ಪರಿಹರಿಸುವ ವಿಧಾನ ಹೊಳೆಯುತ್ತದೆ. ಆಭಾ ನಿಮ್ಮ ಬೆಳವಣಿಗೆಗೆ ಕಾರಣಳಾಗುತ್ತಾಳೆ. ಹೊಸ ದೃಷ್ಟಿಯನ್ನೂ ಕೊಡುತ್ತಾಳೆ. ನಾವು ಮಗುವನ್ನು ಬೆಳೆಸಿದೆವೆಂದು ಹೆಮ್ಮೆ ಪಡುತ್ತೇವೆ, ವಾಸ್ತವದಲ್ಲಿ ಅದೇ ಮಗು ನಮಗೆ ನಿಜ ಜೀವನವನ್ನು ಕಲಿಸಿರುತ್ತದೆ. ನಾವದನ್ನು ತಿಳಿಯುವುದು ನಾವು ಪ್ರತಿ ಬಾರಿ ಹೊಸ ವಿಧಾನಗಳನ್ನು ಹುಡುಕ ಹೊರಟಾಗಲೇ. ಜೀವನ ನವ ನವೀನ.

      Delete
  8. ಜಗತ್ತಿನ ಹಿತವನ್ನು ಬಯಸುವುದು ಯಾವುದಿದೆ ಅದು ಮಾತ್ರ ಸತ್ಯ, ಮತ್ತೆಲ್ಲವೂ ಮಿಥ್ಯ. ಚೆನ್ನಾಗಿದೆ. ಬರೆಯುತ್ತಾ ಇರಿ.

    ReplyDelete
  9. ತುಂಬಾ ಚೆನ್ನಾಗಿದೆ👌👌👌

    ReplyDelete
  10. ಈ ಲೇಖನ ವನ್ನ ಅದೇಕೊ ಜೋರಾಗಿ ( ಶಾಲೆ ಯಲ್ಲಿ ಪಾಟ, ಪದ್ಯ ನಾವೆಲ್ಲ ಓದುತ್ತಿದ್ದ ಹಾಗೆ) ಜೋರಾಗಿ ಓದ್ ಬೇಕು ಎನಿಸಿತು. ಓದಲು ಶುರು ಮಾಡಿದ್ದೆ ತಡ, ಹೆಂಡತಿ ಮುಂದೆ ಓದು , ಮಂದೆ ಓದು ಅಂತ ಇದ್ದಲು :) ನೀವ್ ಹೇಳೋ ಸಂಗತಿಗಳು ಸತ್ಯ ಕ್ಕೆ ತುಂಬ ಹತ್ತಿರ ಇದೆ. ರೀಸೆಂಟ್ ಆಗಿ ನನ್ನ ಪರಿಚಯದ ಓಬ್ಬರಿಗೆ ಅವಳಿ ಮಕ್ಕಳಾದವು.ಮನೆಗೆ ಹೋಗಿ , ಹೀಗೆ ಮಾತಾಡುತ್ತ ಹೇಗಿದೆ parenting experience ಅಂತ ಕೇಳಿದ್ರೆ, ಅವಳು ಹೇಳಿದ್ದು ಹೀಗೆ. "ಅದ್ಯಾರ್ Facebook ಅಲ್ಲಿ apple of my eye , enjoying parenting ಅಂತ ಹಾಕ್ತಾರೋ ಅವ್ರೆಲ್ಲ ಎನ್ ನಿಜ ಹೇಳ್ತಾರೊ, ಸುಳ್ಳು ಹೇಳ್ತಾರೋ ಗೋತ್ತಿಲ್ಲ ಮಾರಾಯ. ನಂಗೊಂತು, ಸತ್ಯ ಹೇಳೋಕೆ ಮನಸ್ಸು ಬರಲ್ಲ, ಸುಳ್ಳು ಹೇಳೋಕೆ ಬಾಯಿ ಬರಲ್ಲ" .

    ReplyDelete
  11. ಎಷ್ಟು ಚೆನ್ನಾಗಿ ಹ೦ಚಿಕೊ೦ಡಿದೀರಿ......ತು೦ಬಾ ಇಷ್ಟವಾಯ್ತು !!!

    ReplyDelete
  12. ಜಯಲಕ್ಷ್ಮಿMarch 17, 2018 at 5:00 PM

    ನಿನ್ನ ಆಲೋಚನೆಗಳು ಸೂಕ್ಷ್ಮವಾಗಿದ್ದರೂ ಅವನ್ನು ಸರಳವಾಗಿ ಹೇಳಿದ ಪರಿ ಬಹಳ ಇಷ್ಟವಾಯಿತು.ಆಭಾಳ "ಹತ್ತೀ"(ನಾ ಅದನ್ನು ಕೇಳಿಲ್ಲ) ನಿನ್ನೆ ಈ ಲೇಖನವನ್ನು ಓದಿ ಮುಗಿಸಿದ ಮೇಲೂ ನನ್ನ ಕಿವಿಯಲ್ಲಿ ಮೊರೆದಂತಾಗುತ್ತಿತ್ತು.

    ReplyDelete
  13. ವಿಷಯ ನಿತ್ಯ ನೂತನ, ಅದೂ ಪುಟ್ಟ ಮಗುವಿನ ಅಮ್ಮನಿಗಂತೂ ಸತ್ಯ
    ಸ್ವೀಕರಿಸಿದ ಪರಿಯ ಸಂಭ್ರಮ
    ನಿರೂಪಣೆಯಲ್ಲಿ ಹೊಸತನ

    ಚೆನ್ನಾಗಿ ಬಂದಿದೆ ��

    ಹತ್ತು ಹತ್ತೀ ಧ್ವನಿ ಮುದ್ರಿಸಿ ಇಲ್ಲಿ ಹಾಕಬಹುದೇ

    ReplyDelete
  14. ಅದ್ಭುತ ಬರವಣಿಗೆ! ಸ್ವಯಂಪ್ರೇರಣೆಯಿಂದಲೇ ಇದು ಸಾಧ್ಯವಾದದ್ದು! ಇನ್ನೂ ಬರೆಯಿರಿ

    ReplyDelete
  15. ಕನ್ನಡತಿ ಕನ್ನಡMarch 21, 2018 at 8:52 PM

    ಇದೇ ಏರಿಯಾದಲ್ಲಿ ಸುಮಾರು ವರ್ಷಗಳಿಂದ ಇದ್ದು ಅನುಭವಿಸುತ್ತಿರುವ ನಮ್ಮ ಆಟೋಪಾಡೂ ಕೂಡ ಹೌದು! ಸೂಕ್ಷ್ಮ ಮನಸಿಗೆ ಗ್ರಹ್ಯವೆನಿಸಿದ್ದನ್ನು ಅಕ್ಷರರೂಪಕ್ಕೆ ತರಲು ಅಪಾರ ತಾಳ್ಮೆ ಜೊತೆಗೆ ವೇಳೆಯೂ ಜೊತೆಯಾದರೆ ಇಂಥಹ ಸೃಷ್ಟಿ!! ಚೆಂದದ ಬರಹ.. ಹಿಡಿಸಿತು ��

    ReplyDelete
  16. Tjin's Titanium Earpads - Titsanium Arts & Earpads
    Tjin's Titanium Earpads: Titsanium Arts & Earpads: Titsanium titanium gravel bike Audio. TTS - TTS. TTS. TTS. TTS - TTS. TTS - TTS. TTS. titanium cup TTS - TTS. TTS - TTS. TTS - TTS. TTS - titanium mesh TTS. TTS - TTS. TTS babyliss pro nano titanium curling iron - TTS. babyliss nano titanium

    ReplyDelete

Post a Comment